Wednesday, January 5, 2011

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ

||ಬಾ ಬಾರೊ ವೀರ ಸನ್ಯಾಸಿ ಬಾ
ಸತ್ಯ-ಧರ್ಮದ ತಂಗಾಳಿಯ ಬೀಸಿ ಬಾ||

ನಾಕ-ನರಕಗಳ ಮೀರಿ ಬಾ
ಸಿಹಿ-ಕಹಿಗಳ ಬೆರೆಸಿ ಬಾ
ನಾನು-ನೀನೆಂಬ ಭಾವ ಅಳಿಸ ಬಾ
ಪ್ರೀತಿ-ವಾತ್ಸಲ್ಯದ ಶಾಸನ ಬರೆಸ ಬಾ
||ಬಾ ಬಾರೊ ಬಾ||

ಇತಿಹಾಸದ ಪುಟಗಳಿಂದೆದ್ದು ಬಾ
ದಾರಿ ತಪ್ಪಿಹ ತಾಯ್ನಾಡ ತಿದ್ದು ಬಾ
ಮತಿಯಹೀನರ ಮನವ ತೊಳೆಯ ಬಾ
ಭವಿತವ್ಯದ ಪಥಕೆ ಆಶಾ ಜ್ಯೋತಿಯಾಗು ಬಾ
||ಬಾ ಬಾರೊ ಬಾ||

ಸತ್ಯ ಅಹಿಂಸೆಯ ಮೆರೆಯ ಬಾ
ವಿಶ್ವ ಮಾನವತೆಯ ಪಾಠ ಅರುಹ ಬಾ
ತಾಯ್ ಒಡಲ ಕಿಚ್ಚ ಆರಿಸ ಬಾ
ಭಾರತಾಂಬೆಯ ಶೀಲ ರಕ್ಷಿಸ ಬಾ
||ಬಾ ಬಾರೊ ಬಾ||

ಬಡತನದ ತೃಷೆಯ ನೀಗ ಬಾ
ಸರ್ವರಿಗೂ ಸುಖ-ಶಾಂತಿಯ ತುತ್ತ ಉಣಿಸ ಬಾ
ತಬ್ಬಲಿಗಳ ರೋಧನಕೆ ಓಗೊಟ್ಟು ಬಾ
ಭಾರತ ಮಾತೆಯ ಮಡಿಲ ಮಗುವಾಗಿ ಬಾ
||ಬಾ ಬಾರೊ ಬಾ||

ಜನ್ಮದಾತೆಯ ಕಣ್ಣ ಕಂಬನಿ ಒರೆಸ ಬಾ
ಮೊಗ-ಮೊಗದಲ್ಲೂ ಹರ್ಷ ಲಹರಿ ಹರಿಸ ಬಾ
ಕಂಕಣ ಕಟ್ಟಿ, ಕಾವಿ ಧರಿಸಿ, ಕಾರ್ಯಸನ್ನದ್ಧನಾಗಿ ಬಾ
ಸಾವು-ನೋವುಗಳ ದೂರ ಕ್ರಮಿಸಿ ಬಾ
||ಬಾ ಬಾರೊ ಬಾ||

ಬುವಿಯ ಗರ್ಭದಿಂದ, ಪ್ರಕೃತಿಯ ಇಂಚರದಿಂದ ಬಾ
ಬಾನ ಒಡಲಿಂದ, ಕಡಲ ರವದಿಂದ ಬಾ
ಕಾನನದ ಮರೆಯಿಂದ, ಹಿಂದುವಿನ ಹೃದಯದಿಂದ ಬಾ
ಮತ್ತೊಮ್ಮೆ ಜಗವು ಭಾರತಕೆ ತಲೆಬಾಗುವಂತೆಮಾಡು ಬಾ
||ಬಾ ಬಾರೊ ಬಾ||

||ಬಾ ಬಾರೊ ವಿವೇಕಾನಂದ ಬಾ
ಭಾರತದ ಆನಂದ ಕಂದ ಬಾ||
                                                                                                                                                          

                                -ಕಲ್ಯಾಣ ಕುಲ್ಕರ್ಣಿ

No comments:

Post a Comment