Wednesday, January 5, 2011

ಈ ಪ್ರೀತಿ ಒಂಥರಾ....


ನನ್ಮಗಂದು ಈವತ್ತು ಆ ಮಹಾರಾಣಿ ಕಾಲೇಜ್ ಎದುರಿಂದ ನನ್ನ ದ್ವೀಚಕ್ರ ಯಾತ್ರೆ ಪಾಸಾದಾಗ ಅಲ್ಲಿ ಸುತ್ತಾಡ್ತಿದ್ದ ಹುಡ್ಗೀರು ಮತ್ತು ಅವ್ರ ಕಾಲಿಗೆ ಕಣ್ಣ ಹಾಸಿಗೆ ಹಾಸಿ ಕಾಯ್ತಿದ್ದ ಕೆಲ ಹುಡುಗ್ರ ಕಡೆ ನನ್ನ ಗಮನ ಹೊಯಿತು. ಆಗ ನನಗೆ ನನ್ನ ಬೋರಿಂಗ (ಒಬ್ಬ ಗರ್ಲ್ ಫ಼್ರೆಂಡ್ ಕೂಡಾ ಇಲ್ಲದ) ನನ್ನ ಕಾಲೇಜ್ ಲೈಫ಼್ ನೆನಪಾಗಿ ನನ್ನ ಬಗ್ಗೆನೇ ಬೇಸರ, ಕಿಳರಿಮೆ, ಅಸುಯೆ ಮೂಡೋಷ್ಟು ಹಿಂಸೆ ಆಗಿ, ವೇಸ್ಟ ಬಾಡಿ ಅನ್ಕೊಂಡು ಸುಮ್ನಾದ್ರೂ, ನನ್ನ ಮನಸ್ಸು ಒಳಗಿಂದ, "ನಮ್ಮಂಥವರು, ಹುಟ್ಟೊದ್ಯಾಕೆ, ಸಾಯೋದ್ಯಾಕೆ..." ಅನ್ನೊ ತತ್ವ ಪದಾನ ನನ್ನ ನಾಲಿಗೆಯಿಂದ ಹೇಳಿಸಿ, ಒಂದು ಕ್ಷಣ ಹೃದಯದಲ್ಲಿ ತಾಂಡವ ಆಡಿಸಿ ಹೋಯಿತು.

ಆಲ್ಲಾ ಅಂದ ಹಾಗೆ ಈ ಹುಡುಗ್ರು, ಆ ಹುಡ್ಗಿರ್ನ ದೂರದಿಂದ ಕಣ್ಣಲ್ಲಿ ಸ್ವಾಗತ ಹೇಳಿ, ಮನಸ್ಸಿಂದ ಸತ್ಕರಿಸಿ, ಮರೆಯಾಗೊ ವರೆಗು ಅವರನ್ನ ನೋಡ್ತ ಗೆಳೆಯರೆದುರು ಅವರನ್ನ ಹೊಗಳಿ, ಷಟ್ಪದಿ-ಅಷ್ಟಪದಿ ಗಳನ್ನ ಹಾಡಿ, ಕೊನೆಗೆ ಅವರು ಇವರಕಡೆ ನೋಡದೆ ಹಾಗೇ ಹೋರಟು ಹೊದಾಗ, "ಮಗಾ ಒಂದು ದಿನ ಬರುತ್ತೆ, ಆಗ ಅವಳೇ..." ಆಬ್ಬಬ್ಬ ಅದೆಂಥ ಪೊಜಿಟಿವಿಟಿ! ಆವಳೆನೊ ಜನುಮದ ಜೋಡಿ ಇವನಿಗೆ ಅನ್ನೊ ಹಾಗಿರುತ್ತೆ ಪೊಜು....., ಇರಲಿ.

ಕಾಳಿದಾಸನ ಪ್ರಬುದ್ಧ ಪ್ರೇಮ ರಸ ಕಾವ್ಯದಿಂದ ಹಿಡಿದು ನಮ್ಮ ಮುಂಗಾರು ಮಳೆ ಗಣೇಶನ ಟಪೋರಿ ಭಾಷೇಲಿ ಬರೆದ್ರು/ಹೇಳಿದ್ರು ಮುಗಿದೆ ಇರೊ ಈ ಪ್ರೀತಿಯ ಭಾವನೆಗಳ ರಸದೌತಣದಲ್ಲಿ ನನ್ನದೆರಡು ಕೈ ತುತ್ತು ನಿಮಗಾಗಿ ಇಲ್ಲಿದೆ.

ಈ ಪ್ರೇಮ ಲೋಕ ಅಂದ್ರೆ ಏನು? (ರಸಿಕ ರವಿಚಂದ್ರನ್ ಅವರ ಚೊಚ್ಚಲ ಚಿತ್ರ ಅನ್ನಬೇಡಿ). ನಮ್ಮ ಲೋಕಕ್ಕು ಅದಕ್ಕು ಇರೋ ಅಂತರ ಏನು ಅಂತ ತಲೆ ಕೆಡಿಸ್ಕೊಂಡಿದ್ದುಂಟಾ ಯಾವತ್ತಾದ್ರು?

ಸಿಂಪಲ್ಲಾಗಿ ನಮ್ಮ ಶುದ್ಧ ಕನ್ನಡದಲ್ಲಿ ಹೇಳೋದಾದ್ರೆ, ಇಲ್ಲಿ ನಾನು-ನನ್ನದು ಅಂತ ಕರ್ಚೀಫ಼್ ಹಾಕಿ ಕಚ್ಚಾಡಿದ್ರೆ, ಅಲ್ಲಿ (ಐ ಮೀನ, ಪ್ರೇಮಲೋಕದಲ್ಲಿ) ನಾವು-ನಮ್ಮದು-ಅವರದ್ದು ಅಂತೀವಿ. ಹಾಗೇ ಅಲ್ಲಿ ಎಲ್ಲವೂ ತುಂಬಾನೆ ಉಲ್ಟಾ-ಪಲ್ಟಾ. ಹ್ಯಾಗಂತಿರಾ?

ಇಲ್ಲಿ ನಮ್ಮ ಒಂದು ವಸ್ತುವಿಗೂ ಯಾರದ್ರು ಕಣ್ಣು ಹಾಕಿದ್ರೆ ರೇಗಾಡಿ ಬಿಡ್ತಿವಿ, ಆದ್ರೆ ಅಲ್ಲಿ (ಐ ಮೀನ, ಪ್ರೇಮಲೋಕದಲ್ಲಿ) ಹೃದಯ ನಮ್ಮದಾದ್ರು, ಸಮ್ರಾಜ್ಯ ಅವರದ್ದು, ಬದುಕು ನಮ್ಮದಾದ್ರು ಉಸಿರು ಅವರದ್ದು, ಕಣ್ಣು ನಮ್ಮದಾದ್ರು ಅದರಲ್ಲಿ ಯಾವಗ್ಲು ಕಾಣೋದು ಅವರ ಬಿಂಬ, ನಗು ನಮ್ಮದಾದ್ರು ಮುಖದ ಮೇಲೆ ಅರಳೋದು ಅವರ ನೆನಪಿನ ಪುಷ್ಪ. ಟೈಮ ವೇಸ್ಟ್ ಮಾಡಿ, ಕನಸ್ಸು ಕಟ್ಟಿ, ಅದನ್ನ ಸಾಕಾರಗೊಳಿಸಿ, ಜೀವ ತುಂಬೋದು ನಾವಾದ್ರು, ಕೊನೆಗೆ ಅದರ ಒಡೆತನ ಮಾತ್ರ ಅವರದ್ದೆ. ಆದ್ರು ಒಂದು ಕ್ಷಣ ಅಮೃತ ಪಾನದಷ್ಟು ಖುಷಿ ಕೊಡುತ್ತಲ್ಲಾ ಈ ಪ್ರೀತಿ ಅದು ತುಲನಾತೀತ.

ಇಲ್ಲಿ ಚಿಕ್ಕ ವಸ್ತು ಕಳ್ಕೊಂಡ್ರು ಕಾಂಪ್ಲೇಂಟ್ ಕೊಡ್ತಿವಿ, ಆದ್ರೆ ಅಲ್ಲಿ, ಹೃದಯದ ಬಡಿತ ನಿಂತ್ರು, ರಕ್ತದ ಒತ್ತಡಕ್ಕೆ ಮೈಯೆಲ್ಲ ಬೆವರಿದ್ರು, ಉಸಿರಿನ ಒಡನಾಟ ತಪ್ಪಿದ್ರು, ಕನಸ್ಸನ್ನ ಕೊಳ್ಳೆ ಹೊಡೆದ್ರು, ಭುಮಿಮೇಲೆ ಜಾಗ ಸಿಗ್ಲಿಲ್ಲ ಅಂತ ಹೃದಯದ ಮೇಲೆನೆ ಸೂರು ಹಾಕಿದ್ರು, "ನನ್ನ ಹಾಡು ನನ್ನದು, ನನ್ನ ಭಾವ ನನ್ನದು" ಅಂತ ಹಾಡ್ತಾ ಹಾರಾಡ್ತಿದ್ದ ಮನಸ್ಸಿಗೆ ಮೋಹದ ಮಾತಿನ ಬಲೆಯಲ್ಲಿ ಸೆರೆ ಹಿಡಿದು, ಜೀವಾವಧಿ ಶಿಕ್ಷೆ ಕೊಟ್ಟು, ಆಜೀವನ ಪ್ರೀತಿಯಿಂದ ಹೃದಯದ ಕೋಣೆಲಿ ಕೂಡಿ ಹಾಕಿದ್ರು, ತುಟಿಕ್-ಪಿಟಿಕ್ ಅನ್ನಲ್ಲ ಅಲ್ಲ? ಅದೆ ರೀ ಈ ಪ್ರೀತಿ ಮತ್ತು ಅದರ ಪ್ರೇಮ ಲೋಕ.

ಈ ಪ್ರೀತಿಲಿ ಎಷ್ಟು ಶಕ್ತಿ ಇದೆ ಗೊತ್ತಾ? ನಮ್ಮ ಪಕ್ಕದ್ ಮನೆ ಪ್ರಕಾಷಾ, ಹತ್ತನೆ ಪರೀಕ್ಷೆಲಿ ಆಮೀಬಾ ಸ್ಕೆಚ್ಚನ್ನ ಕಾಪಿ ಹೊಡೆದು ಡಿಬಾರ್ ಅದೋನು ಈವತ್ತು ಪಾರ್ವತಿ ಸಿಕ್ಕಾಗಿಂದ ರವಿ ವರ್ಮನ ಕುಂಚದಲ್ಲು ತಪ್ಪು ಕಂಡು ಹಿಡೀತಾನೆ. ನಮ್ಮ ಚಂದ್ರು "ಬಾರಿಸು ಕನ್ನಡ ಡಿಂ ಡಿಂಮವ..." ಅನ್ನೊ ಕುವೆಂಪು ರವರ ಪದ್ಯಾ ಸರಿಯಾಗಿ ಒದಕ್ಕೆ ಬರ್ಲಿಲ್ಲ ಅಂತ ಕನ್ನಡ ಟೀಚರ್ ಕೈಲಿ ಪದೇ ಪದೇ ಹೊಡಿಸ್ಕೊಂಡೋನು ಇವತ್ತು ಕಾಯ್ಕಿಣಿ ಅವರ ಕಾವ್ಯದ ವಿಮರ್ಷೆ ಮಾಡ್ತಾನೆ. ಮೂರು-ಮೂರು ದಿವಸಕ್ಕೊಂದಸಾರಿ ಸ್ನಾನ ಮಡ್ತಿದ್ದ ಸೋಮ, ಈವಾಗ ಮೂರು-ಮೂರು ಗಂಟೆಗೊಂದಸಾರಿ ಸ್ನಾನಾ ಮಡಿ ಸೇಂಟ್ ಹಾಕ್ಕೊಂಡು ನೀಟಾಗಿ ಡ್ರೆಸ್ಸ್ ಮಡ್ತಾನೆ ಆಂತೀನಿ. ಇನ್ನೂ ವಿಚಿತ್ರ ಎನುಗೊತ್ತ? ಮಾತಾಡಿದ್ರೆ ಮಚ್ಚು, ಚಾಕು, ಚೂರಿ ಅಂತಿದ್ದ ಶೀನ ಈವತ್ತು ಬದುಕ್ಕೊಳ್ಳಲಿ ಬಿಡ್ರಲಾ ಅಂತಾವ್ನೆ...

ಈ ಪ್ರೀತಿನೆ ಓಂಥರಾ ಹೀಗೆ, ಕಲ್ಪನೆಗೆ ಸಿಗದ್ದು, ವರ್ಣನೆಗೆ ಮೀರಿದ್ದು, ಎಂದಿಗೂ ಮುಗಿಯದ್ದು. ಭೂಮಿ ಭಾರದ ಭಾವನೆಗಳೆ ಅದಕ್ಕೆ ತುಲಾಭಾರ, ಇದರ ಸ್ಪಂದನದಲ್ಲೇ ಲೋಕದ ಸಕ್ಷಾತ್ಕಾರ, ಇದರ ಆರಾಧಾನೆಯೇ ಮನ-ಮಿಡಿತಗಳ ಸಹಜ ಪ್ರವೃತ್ತಿ, ಇದರ ಒಡನಾಟವೇ ಸಾಹಿತ್ಯದ ಭಂಡಾರ, ಇದರ ಸ್ಪರ್ಷದಲ್ಲೇ ಮರುಜನ್ಮದ ಅನುಭವ, ಜನ-ಮನ ಗೆಲ್ಲುವ ಮೌನ ಭಾಷೆಯೇ ಇದರ ವೈಖರಿ, ಮುದ ನೀಡುವ ಇದರ ರೂಪವೇ ಈ ಜಗದ ಅನು-ಕ್ಷಣದ ಅಸ್ತಿತ್ವದ ರೀತಿ, ಇದರ ಸ್ನೇಹದ ಬಂಧವೇ ಇಹ-ಪರಕು ಮುಕ್ತಿ.

ಇಲ್ಲಿ ಮನಸ್ಸೇ ನಾವು, ನಮ್ಮ ದೇಹವೇ ತಾಯಿ, ಬುಧ್ದಿಯೇ ತಂದೆ. ಬುದ್ಧಿ (ತಂದೆ) ಎಷ್ಟೇ ತಡೆದ್ರು/ಭಾವನೆಗಳಿಗೆ ಫ಼ಿಲ್ಟರ್ ಹಿಡಿದ್ರು, ದೇಹದ (ತಾಯಿಯ) ಸಹಕಾರ ಇದ್ರೆ, ಮನಸ್ಸಿನ ವೇಗಕ್ಕೆ ಬುದ್ಧಿಯ ಲಗಾಮು ಕಡಿದು ಹೋಗುತ್ತೆ. ಇನ್ನು ಅದರಲ್ಲೂ ಭಾವನೆಗಳ ಸ್ಪ್ರಿಂಗ್ ಮೇಲೆ ಜೀವನ ಯದ್ವಾ-ತದ್ವಾ ಹಿಪ್-ಹಾಪ್ ಡಾನ್ಸ್ ಮಾಡ್ತಾ ಇದ್ರೆ ಯಾರಿಗೆತಾನೆ ಯೌವ್ವನ ರುಚಿಸಲ್ಲಾ? ಇಂಥದ್ರಲ್ಲಿ ವೇದಗಳ ಅರ್ಥ ಹುಡುಕೊಕ್ಕೆ ಯಾರಿಗೆತಾನೆ ಇಷ್ಟ? ಟೈಮ್ ಯಾರಿಗಿದೆ?

ಜೀವಮಾನದ ವಯಸ್ಸಿನ ಘಟ್ಟಗಳಿಗೆ ಒಂಚೂರು ಪ್ರೀತಿಯ ಬೈಯೋಸ್ಕೋಪ್ ಹಿಡಿದು ನೋಡೊಣವಾ?..... ಬನ್ನಿ, ಆದ್ರೆ ಒಂದು ನೆನಪಿರಲಿ, ಇದು ಯೋಗರಾಜ್ ಭಟ್ಟರ ನವಪೀಳಿಗೆಯ ಆಡು ಭಾಷೇಯ ಸಂಭಾಷಣೆಯ ಮನ ತಟ್ಟೊ ಚಿತ್ರಣವೂ ಅಲ್ಲಾ, ಯಶ್ ರಾಜ್ ನ ಶೃಂಗಾರಭರಿತ ಕಾವ್ಯಾತ್ಮಕ ಯುವ ಹೃದಯಗಳ ಉನ್ಮಾದ ಕೂಡ ಅಲ್ಲ. ಎನಿದ್ರು ಇದು ದಿನನಿತ್ಯದ ಪ್ರೀತಿಯ ಜೊತೆಗಿನ ನಿಮ್ಮ-ನಮ್ಮೆಲ್ಲರ ಅನುಭವದ ಅನುವಾದ ಅಷ್ಟೇ... (೧೦೦% ಹೃದಯ, ೦% ಟ್ಯಾಕ್ಸ್). ಭಾವನೆಗಳಿಗೆ ಶಬ್ದಗಳ ಚೌಕಟ್ಟು ಅಂತಿರಾ? (ಐ ಲೈಕ್ ಇಟ್, ಐ ಲೈಕ್ ಇಟ್, ಕಾಂತಾ...)

ಪ್ರಾಥಮೀಕ ಶಾಲೇಲಿ ಇದ್ದಾಗ್ಲೇ ಹುಟ್ಟಿಕೊಳ್ಳೊ ಸ್ನೇಹ-ಸಲಿಗೆಯ ಮೊದ-ಮೊದಲ ಮಂದ ಸ್ಪರ್ಷ, ಕ್ಲಾಸಲ್ಲಿರೊ ಯಾರದಾದ್ರು ಹೆಸರು ತೆಗೆದುಕೊಂಡು ಅವರಿವರು ಕಾಲೆಳೆದಾಗ ಕಣ್ಣು ಚಿಕ್ಕದಾಗಿ, ತುಟಿ ಅರಳಿ, ನಾಚಿಕೆಯ ಪರದೆ ಮುಖದ್ಮೇಲೆ ಆವರಿಸೋದು. ಆದರೂ ಅರಿಯದ ಭಾವನೆಗಳಿಗೆ ಅಷ್ಟು ಸಲೀಸಾಗಿ ಹರಿದು ಹೋಗೊ ವಯಸ್ಸಲ್ಲ ಬಿಡಿ ಅದು.

ಯೌವ್ವನ, ಪ್ರಾಯ, ಹರೆಯ, ಯುಥ್, ಜವಾನಿ, ಅಂತೆಲ್ಲ ಕರೆಸಿಕೊಳ್ಳೊ ವಯಸ್ಸಿನ ಈ ಘಟ್ಟಕ್ಕೆ ತಾನೆ ಪ್ರೀತಿಯ ಕಿರೀಟ ದಕ್ಕಿರೋದು? ಯೌವ್ವನದಲ್ಲಿ ಮೈ-ಮನ-ಹೃದಯಗಳ ಮೇಲೆಲ್ಲ ಈ ಪ್ರೀತಿಯ ಸಾಮ್ರಾಜ್ಯವೇ ಸರಿ. ಆಸೆ, ಕನಸ್ಸು, ನನಸ್ಸುಗಳ ರೆಕ್ಕೆ ತೊಟ್ಟು ಭಾವಗಳ ಅಂಬರದಲ್ಲಿ ಗರಿಗೆದರಿ, ಬಲೆ-ಬೇಲಿ ಇಲ್ಲದೆ, ಎಲ್ಲೆ ಮೀರಿ ಮೈ ಮರೆತು ವಿಹರಿಸುವ ಅನುಭವ. ಪ್ರತಿ ದಿನವೂ ಪ್ರಾಯದ ಥೇರಿಗೆ, ಭಾವಗಳ ಕುದುರೆ ಕಟ್ಟಿ, ಕಣ್ಣ ಬಿಲ್ಲಿಗೆ ಮಂದಹಾಸದ ಬಾಣ ಹೂಡಿ, ಮನಸ್ಸಿನ ದಿಕ್ಕಿಗೆ ಗುರಿ ಇಟ್ಟು ಹೃದಯಗಳ ಬೇಟೆ ಆಡೊ ಕಾಲವದು. ಇಲ್ಲಿ ಪ್ರೀತಿಗೆ ಬೆಲೆ ಜಾಸ್ತಿ, ಜೀವನದ ಬೆಲೆ ಕಮ್ಮಿ.

ಕಾಲೇಜುಗಳು ಇವರಿಗೆ ಫ್ರೀಯಾಗಿ ಪರಿಚಯಿಸುವ ಗೆಳೆಯರ ಅಂಗಳಗಳು/ಕೇಂದ್ರಗಳು. ಕಾಲೇಜ್ ಕಂಪೌಂಡಗಳು ಫ಼್ಯಾಷನ್ ಸ್ಟ್ರೀಟ್ ಗಳಾಗಿ, ಕ್ಲಾಸ್ಸುಗಳು ಮನೆಯವರು ಬೇಡ ಅನ್ನಕ್ಕಾಗದ ನೆಪಗಳಾಗಿ, ಕ್ಯಾಂಟೀನುಗಳು ಚರ್ಚಾ ಕಣಗಳಾಗಿ, ಎಲ್ಲವೂ ಪ್ರಕೃತಿದತ್ತವಾಗಿ ಹೃದಯ ಸಂಗಮಕ್ಕೆ ಸಜ್ಜು ಅನ್ನೊ ಹಾಗಿರುತ್ತೆ. ಎಲ್ಲ ರೋಮ್ಯಾಂಟಿಕ್ ಫಿಲ್ಮಗಳು ಇವರಿಗೆ ಪ್ರತಿಯೊಂದು ನಡವಳಿಕೆನ ರಿಹರ್ಸಲ್ ಮಾಡಿಸಿಕೊಟ್ಟ ಹಾಗಿರುತ್ತೆ. "ಗರ್ ಕೊಇ ಚೀಜ಼್ ಕೊ ಆಪ್ ಶಿದ್ದತ್ ಸೆ ಚಾಹೆ ತೊ ಸಾರಿ ಕಾಯ್ನಾತ ಉಸೆ ಆಪ್ಸೆ ಮಿಲಾನೆ ಮೆ ಲಗ್ ಜಾತಿ ಹೈ" ಅನ್ನೊ ಓಮ್-ಶಾಂತಿ-ಓಮ್ ಚಿತ್ರದ ಡೈಲೌಗ್ ತರಹ ಎಲ್ಲವೂ ಫ಼ುಲ್ಲ್ ಸಪೋರ್ಟಿವ್. ಏವರಿ ಥಿಂಗ್ ಇನ್ ಪ್ಲೇಸ್, ಅನ್ನೊ ಹಾಗಿರುತ್ತೆ.

ಮಾರ್ನಿಂಗನ ಮೊದಲ ಮೀಟಿಂಗ್ ನಿಂದ ಹಿಡಿದು, ಮಧ್ಯಾಹ್ನದ ನೆಟ್-ಚಾಟ್, ಸಾಯಂಕಾಲದ ಫ಼ೆಸ್ಬೂಕ್, ಆರ್ಕುಟ್ ನ ದರ್ಶನ, ರಾತ್ರಿಯ ಮೊಬೈಲ್ ಗುಡನೈಟ್, ಸ್ವೀಟ್ ಡ್ರೀಮ್ಸ್-ಗಳವರೆಗು ಮುಗಿಯದ ಮಾತು. ಮತ್ತೆ ನಾಳೆವರೆಗು ಮೀಟ್ ಆಗೊದಕ್ಕೆ ಕಾಯೋದು, ಮತ್ತೆ ಅದೇ ಯೊಚನೇಲಿ ರಾತ್ರಿ ಕಳೆಯೋದು, ಆ ರಾತ್ರಿಗಳ ಒಂದೊಂದು ಕ್ಷಣ ಕಳೆಯೋದುಕೂಡ (ಆಡಮ್ ಮತ್ತು ಈವ್ ಅವರ ಯುಗದಿಂದ ಹಿಡಿದು ಈ ಕ್ಷಣದ ವರೆಗಾಗೊ ಸಮಯದಷ್ಟು ದೊಡ್ಡದಾಗಿರುತ್ತೆ) ಎಷ್ಟು ಕಷ್ಟ ಅಂತ ನಿಮಗೆ ಗೊತ್ತಾ?

...... ನಗ್ತಾ ಇದೀರಾ? ಪಾಪ ನಿಮಗೆನ್ರಿ ಗೊತ್ತು ಈ ಪ್ರೀತಿಲಿರೋರ ಪರದಾಟಾ ಎಲ್ಲಾ?.

ಮುಂದೆ ಈ ಪ್ರೀತಿ ಸಂಸಾರಕ್ಕೆ ಕಾಲಿಟ್ಟಾಗ, ಕಣ್ಣಲ್ಲಿ ಮುಳುಗಿದ್ದು, ಮನದಲ್ಲಿ ತೆಲಿದಂತೆ; ಹೃದಯದಲ್ಲಿ ಅಡಗಿದ್ದು, ಬಡಿತದಲ್ಲಿ ಕಾಣಿಸಿಕೊಂಡಂತೆ; ಮಾತಲ್ಲಿ ಗುಡುಗಿದ್ದು, ಮೌನದಲ್ಲಿ ಕರಗಿದಂತೆ; ಉಸಿರಲ್ಲಿ ತಡೆದದ್ದು, ಭಾವಗಳಲ್ಲಿ ಹರಿದಂತೆ; ಕನಸಲ್ಲಿ ಮೊಗ್ಗೊಡೆದದ್ದು, ನನಸಲ್ಲಿ ಅರಳಿದಂತೆ. "ತನುವು ನಿನ್ನದು, ಮನವು ನಿನ್ನದು, ಎನ್ನ ಜೀವನ ಧನವು ನಿನ್ನದು;  ನಾನು ನಿನ್ನವನೆಮ್ಬ ಹೆಮ್ಮೆಯ ಋಣವು ಮಾತ್ರವೆ ನನ್ನದು..." ಅನ್ನೊ ಸಮರ್ಪಣಾ ಭಾವ ಮನದಲ್ಲಿ.

ಇಂಥ ರೋಮಾಂಚಕ ಒಲವಿನಲ್ಲೇ ಜೀವನ ಸಕ್ಷಾತ್ಕಾರದ ಅನುಭವ. ಪ್ರೀತಿನ ಪ್ರೀತಿಯಿಂದ ಮುದ್ದಿಸಿ, ಶೃಂಗರಿಸಿ, ಸರ್ವಸ್ವ ಧಾರೆಯೆರೆದು, ಬಾಳ ದಾರಿಯುದ್ದಕ್ಕು ಕೈ ಹಿಡಿದು, ಹೆಜ್ಜೆಯಡಿ ಹೆಜ್ಜೆ ಇಟ್ಟು, ಬರುವ ಕಷ್ಟಗಳಿಗೆ ಜೊತೆಯಾಗಿ ಎದೆಯೊಡ್ಡಿ, ಸುಖ-ಸಂತೋಷಕ್ಕೆ ತಾಳಹಾಕಿ, ಸಿಹಿ-ಕಹಿ ನೆನಪುಗಳ ಆಲ್ಬಮ್-ವೀಡಿಯೊಗಳಿಗೆ ನಾಯಕ-ನಾಯಕಿಯರಾಗಿ ಮಿಂಚಿ, ಜೀವನದ ಅನುಭವಗಳ ಮೂಟೆ ಕಟ್ಟುವ ಪ್ರೀತಿಯ ಘಟ್ಟವದು. ನಂತರ ಸಂಸಾರ ಕುಟುಂಬಕ್ಕೆ ತಿರುಗಿ, ಸೆರಗಲ್ಲಿದ್ದ ನೆಲೆಪಡೆದಿದ್ದ ಪ್ರೀತಿ, ಭವಿಷ್ಯದ ಕುಡಿಗಳಿಗೆ ಸೂರಾಗೊದು.

ಆದ್ರೆ ಇಷ್ಟೆಲ್ಲಾ ಆದ್ರೂ ಪ್ರೀತಿಯ ಕಣ್ಣ-ಮುಚ್ಚಾಲೆ ಆಟದಲ್ಲಿ ಏನಾಗುತ್ತೊ ಹೇಳೊಕ್ಕಾಗಲ್ಲ, ಹೀಗೆ ಅಗುತ್ತೆ ಅಂತ ಖಚಿತತೆ ಇಲ್ಲ. ಎಲ್ಲವೂ ತೆರೆದ ಪುಸ್ತಕ ಆದ್ರು ಎಲ್ಲವೂ ನಿಗೂಢ. ಕೆಲವೊಮ್ಮೆ ಜೀವನ, ಕೆಲವೊಮ್ಮೆ ಜವಾಬ್ದಾರಿಗಳು, ಕೆಲವೊಮ್ಮೆ ಪರಿಸ್ಥಿತಿಗಳು, ಇನ್ನೂ ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ ಬದಲಾಗೊ ಮನಸ್ಸುಗಳು, (ಆವಣ, ದುರ್ಯೋಧನ, ವಜ್ರಮುನಿ, ಆಂಬರೀಷ ಪುರಿ ಯಾಗಿ) ಇದಕ್ಕೆ ಕಾರಣವಾಗಬಹುದು.

ಜೀವನದ ಓಟದಲ್ಲಿ ದಣಿವಾಗಿ ನಿಂತ್ಕೊಂಡಾಗ, ಸಾಂತ್ವನ ಹೇಳಿ, ಮತ್ತೆ ಹೋಪ್ಸಗಳ ಏಣಿ ಹತ್ತಿಸೊ ಇದೆ ಪ್ರೀತಿ, ಮತ್ತೆ ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಾಣೆಯಾಗೊದು.

ಇನ್ನು ವೃದ್ಧಾಪ್ಯದಲ್ಲಿ ಇದರ ವ್ಯಾಪ್ತಿ ಇನ್ನೂ ದೊಡ್ಡದು, ಮಕ್ಕಳು ಮೊಮ್ಮಕ್ಕಳು ಅಂತೆಲ್ಲಾ. ಇದು ಪ್ರೀತಿಯ ಸಾರ್ಥಕತೆಯ ಪರಿ-ಪಕ್ವ ಹಣ್ಣನ್ನ ಕುಟುಂಬದ ಜೊತೆ ಹಂಚಿಕೊಂಡು ರುಚಿ ಅನುಭವಿಸುವ ಸಮಯ. ಜಗತ್ತು ಬೇಡವಾಗಿ, ನನ್ನ ಪ್ರೀತಿ ಜೊತೆಗಿದ್ರೆ ಸಾಕು ಅನ್ನೊ ನಿಃಸ್ವಾರ್ಥ ಮನಸ್ಸಿನ ಬದುಕಿನ ಸರಾಂಶದ ಘಟ್ಟ ಅದು.

ಓಟ್ಟಾರೆ, ಸುಖ, ಸಂತೋಷ, ಸಾಧನೆ, ಏಳಿಗೆ, ಜೀವನ ತೃಪ್ತಿ, ಎಲ್ಲವೂ ಪ್ರೀತಿಯ ತದ್-ರೂಪಗಳೆ. ಜೀವನದ ಗೋಡೆಗೆ ಏಷಿಯನ್ ಪೇಂಟ್ಸಗಳ ಬಣ್ಣ ಇದ್ದಂತೆ ಈ ಪ್ರೀತಿ. ಆದಕ್ಕೇ ಕವಿ ಹೇಳಿರೊದು, "ಈ ಪ್ರೀತಿ ಓಂಥರಾ ------------------------- ಅಂತ". ಈ ಬಿಟ್ಟ ಸ್ಥಳದಲ್ಲಿ ನಿಮ್ಮ ಅನುಭವದ ವ್ಯಾಖೆ (ಡೆಫ಼ಿನೆಷನ್) ನ ತುಂಬಿ.

ಯಾಕಂದ್ರೆ ನಿಮ್ಮ ಅಭಿಪ್ರಾಯ ನಿಮ್ಮದೆ....

                                                                                                                                                                                                                                                                                                                                                                                                                                                    -                                                                                                                                      --ನಿಮ್ಮವ,
                                                                                                                         ಕಲ್ಯಾಣ ಕುಲಕರ್ಣಿ

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ

||ಬಾ ಬಾರೊ ವೀರ ಸನ್ಯಾಸಿ ಬಾ
ಸತ್ಯ-ಧರ್ಮದ ತಂಗಾಳಿಯ ಬೀಸಿ ಬಾ||

ನಾಕ-ನರಕಗಳ ಮೀರಿ ಬಾ
ಸಿಹಿ-ಕಹಿಗಳ ಬೆರೆಸಿ ಬಾ
ನಾನು-ನೀನೆಂಬ ಭಾವ ಅಳಿಸ ಬಾ
ಪ್ರೀತಿ-ವಾತ್ಸಲ್ಯದ ಶಾಸನ ಬರೆಸ ಬಾ
||ಬಾ ಬಾರೊ ಬಾ||

ಇತಿಹಾಸದ ಪುಟಗಳಿಂದೆದ್ದು ಬಾ
ದಾರಿ ತಪ್ಪಿಹ ತಾಯ್ನಾಡ ತಿದ್ದು ಬಾ
ಮತಿಯಹೀನರ ಮನವ ತೊಳೆಯ ಬಾ
ಭವಿತವ್ಯದ ಪಥಕೆ ಆಶಾ ಜ್ಯೋತಿಯಾಗು ಬಾ
||ಬಾ ಬಾರೊ ಬಾ||

ಸತ್ಯ ಅಹಿಂಸೆಯ ಮೆರೆಯ ಬಾ
ವಿಶ್ವ ಮಾನವತೆಯ ಪಾಠ ಅರುಹ ಬಾ
ತಾಯ್ ಒಡಲ ಕಿಚ್ಚ ಆರಿಸ ಬಾ
ಭಾರತಾಂಬೆಯ ಶೀಲ ರಕ್ಷಿಸ ಬಾ
||ಬಾ ಬಾರೊ ಬಾ||

ಬಡತನದ ತೃಷೆಯ ನೀಗ ಬಾ
ಸರ್ವರಿಗೂ ಸುಖ-ಶಾಂತಿಯ ತುತ್ತ ಉಣಿಸ ಬಾ
ತಬ್ಬಲಿಗಳ ರೋಧನಕೆ ಓಗೊಟ್ಟು ಬಾ
ಭಾರತ ಮಾತೆಯ ಮಡಿಲ ಮಗುವಾಗಿ ಬಾ
||ಬಾ ಬಾರೊ ಬಾ||

ಜನ್ಮದಾತೆಯ ಕಣ್ಣ ಕಂಬನಿ ಒರೆಸ ಬಾ
ಮೊಗ-ಮೊಗದಲ್ಲೂ ಹರ್ಷ ಲಹರಿ ಹರಿಸ ಬಾ
ಕಂಕಣ ಕಟ್ಟಿ, ಕಾವಿ ಧರಿಸಿ, ಕಾರ್ಯಸನ್ನದ್ಧನಾಗಿ ಬಾ
ಸಾವು-ನೋವುಗಳ ದೂರ ಕ್ರಮಿಸಿ ಬಾ
||ಬಾ ಬಾರೊ ಬಾ||

ಬುವಿಯ ಗರ್ಭದಿಂದ, ಪ್ರಕೃತಿಯ ಇಂಚರದಿಂದ ಬಾ
ಬಾನ ಒಡಲಿಂದ, ಕಡಲ ರವದಿಂದ ಬಾ
ಕಾನನದ ಮರೆಯಿಂದ, ಹಿಂದುವಿನ ಹೃದಯದಿಂದ ಬಾ
ಮತ್ತೊಮ್ಮೆ ಜಗವು ಭಾರತಕೆ ತಲೆಬಾಗುವಂತೆಮಾಡು ಬಾ
||ಬಾ ಬಾರೊ ಬಾ||

||ಬಾ ಬಾರೊ ವಿವೇಕಾನಂದ ಬಾ
ಭಾರತದ ಆನಂದ ಕಂದ ಬಾ||
                                                                                                                                                          

                                -ಕಲ್ಯಾಣ ಕುಲ್ಕರ್ಣಿ